ಭಾಷೆ
ಕನ್ನಡ ಮತ್ತು ಪ್ರಾಕೃತ

ಕನ್ನಡ(ಕರ್ನಾಟಕ) ಮತ್ತು ಪ್ರಾಕೃತಗಳ ನಡುವಿನ ಸಂಬಂಧವು ಕ್ರಿಸ್ತಪೂರ್ವ ಯುಗದಿಂದಲೂ ಬೆಳೆದುಬಂದಿದೆ. ಬ್ರಹ್ಮಗಿರಿ, ಸಿದ್ದಾಪುರ, ಜಟಿಂಗ ರಾಮೇಶ್ವರ, ಮಸ್ಕಿ ಮುಂತಾದ ಕಡೆ ಸಿಕ್ಕಿರುವ ಅಶೋಕನ ಬಂಡೆಶಾಸನಗಳು ಪ್ರಾಕೃತಭಾಷೆಯಲ್ಲಿವೆ. ಆ ಕಾಲದಲ್ಲಿಯೇ ಪ್ರಾಕೃತವನ್ನು ಓದಲು ಮತ್ತು ಮಾತನಾಡಲು ತಿಳಿದಿದ್ದ ಕಿರು ಸಮುದಾಯವೊಂದರ ಅಸ್ತಿತ್ವವನ್ನು ಈ ಬರವಣಿಗೆಯು ಸ್ಪಷ್ಟಪಡಿಸುತ್ತದೆ, ಭದ್ರಬಾಹು ಭಟಾರಕ ಮತ್ತು ಚಂದ್ರಗುಪ್ತರ ಆಗಮನವು ಪ್ರಾಕೃತದ ಬಳಕೆಯನ್ನು ಇನ್ನಷ್ಟು ಹೆಚ್ಚು ಮಾಡಿರಬಹುದು. ಕನ್ನಡವು ಸಂಸ್ಕೃತದ ಎಷ್ಟೋ ಅಂಶಗಳನ್ನು ಸಂಸ್ಕೃತದ ಮೂಲಕ ತನ್ನೊಳಗೆ ತೆಗೆದುಕೊಂಡಿದೆ. ಕೆಲವು ಬಾರಿ ನೇರವಾಗಿ ಪ್ರಾಕೃತದ ಅಂಶಗಳನ್ನೇ ಎರವಲು ಪಡೆದಿದೆ. ಪ್ರಾಕೃತದ ಸಾಹಿತ್ಯಕ ಮತ್ತು ಜ್ಞಾನಪ್ರಧಾನ ಪಠ್ಯಗಳನ್ನು ಕನ್ನಡಕ್ಕೆ ತರುವ ಕೆಲಸವು ಮೊದಲಿನಿಂದಲೂ ನಡೆದುಬಂದಿದೆ. ಆದರೆ, ನಮ್ಮ ಈ ಟಿಪ್ಪಣಿಯು ಭಾಷಿಕವಾದ ಪ್ರಭಾವಗಳಿಗೆ ಸೀಮಿತವಾಗಿದೆ. ಈ ಪ್ರಭಾವವು, ಕೇವಲ ಶಬ್ದಕೋಶಕ್ಕೆ ಸೀಮಿತವಾಗಿಲ್ಲ. ಅದು ಕೆಲವು ಪದರಚನೆ ಮತ್ತು ವಾಕ್ಯರಚನೆಯ ನಿಯಮಗಳ ಮೇಲೆಯೂ ಪರಿಣಾಮ ಬೀರಿದೆ.

ಕನ್ನಡ ಭಾಷೆಯ ಪ್ರಾಚೀನತೆಯನ್ನು ಕುರಿತು ಚರ್ಚಿಸುವಾಗ, ಹಳೆಯ ಪ್ರಾಕೃತ ಪುಸ್ತಕಗಳಲ್ಲಿ ಸಿಕ್ಕಿರುವ ಕನ್ನಡ ಪದಗಳನ್ನು ಪ್ರಸ್ತಾಪ ಮಾಡುತ್ತಾರೆ. ಕ್ರಿ.ಶ. ಮೊದಲನೆಯ ಶತಮಾನದಲ್ಲಿ ರಚಿತವಾದ, ಹಾಲರಾಜನ ಗಾಥಾಸಪ್ತಶತಿ ಎಂಬ ಪುಸ್ತಕದಲ್ಲಿ ಬರುವ ಪೊಟ್ಟ, ತುಪ್ಪ, ಅಟ್ಟ, ಅತ್ತೆ ಮುಂತಾದ ಪದಗಳ ಮೂಲವನ್ನು ಕನ್ನಡದ ಪೊಟ್ಟೆ, ತುಪ್ಪ, ಅತ್ತೆ ಇತ್ಯಾದಿ ಪದಗಳಲ್ಲಿ ಹುಡುಕಲಾಗಿದೆ.

ಹೇಮಚಂದ್ರನ ದೇಶೀ ನಾಮಮಾಲೆಯಂತಹ ನಿಘಂಟುಗಳಲ್ಲಿ ಬರುವ ಅನೇಕ ಪದಗಳು ಕನ್ನಡದಿಂದಲೋ ಅಥವಾ ಅದರ ಸಂಗಡಿಗಭಾಷೆಗಳಿಂದಲೋ(ಕಾಗ್ನೇಟ್ಸ್) ಬಂದಿರಬಹುದೆಂದು ಊಹಿಸಲಾಗಿದೆ. ಕರ್ನಾಟಕವು ಪ್ರಾಕೃತಭಾಷೆಯಲ್ಲಿ ಬಹಳವಾಗಿ ಬರೆದ ಎಷ್ಟೋ ಲೇಖಕರಿಗೆ ಆಶ್ರಯ ಕೊಟ್ಟಿದೆ. ಜೈನ ರಾಜವಂಶಗಳ ಆಳ್ವಿಕೆಯ ಕಾಲದಲ್ಲಿ ಈ ರಾಜಾಶ್ರಯವು ತೀವ್ರವಾಗಿತ್ತು. ತ್ರಿವಕ್ರಮನ ಪ್ರಾಕೃತ ವ್ಯಾಕರಣ. ಪುಷ್ಪದಂತನ ಮಹಾಪುರಾಣ, ವೀರಸೇನಾಚಾರ್ಯರ ಧವಳಾ, ಜಯಧವಳಾ ಮತ್ತು ಮಹಾಧವಳಾ ಎಂಬ ಪುಸ್ತಕಗಳು, ನೇಮಿಚಂದ್ರ ಯತಿಯ ಗೊಮ್ಮಟಸಾರ ಮತ್ತು ತ್ರಿಲೋಕಸಾರಗಳು ಈ ಮಾತಿಗೆ ನಿದರ್ಶನಗಳು.

ಕನ್ನಡದ ಅನೇಕ ಸಾಹಿತ್ಯಕೃತಿಗಳು ಪ್ರಾಕೃತ ಗ್ರಂಥಗಳಿಂದ ಸ್ಫೂರ್ತಿ ಪಡೆದಿವೆ. ಅವುಗಳಲ್ಲಿ ಅನೇಕ ಪ್ರಾಕೃತ ಪದಗಳೂ ಇವೆ. ವಡ್ಡಾರಾಧನೆ ಮತ್ತು ಕಬ್ಬಿಗರ ಕಾವ ಇದಕ್ಕೆ ಉದಾಹರಣೆಗಳು. ರಗಳೆ, ಕಂದಪದ್ಯ ಮುಂತಾದ ಛಂದೋರೂಪಗಳ ಮೇಲೆ, ಪ್ರಾಕೃತದ ರಘಟಾಬಂಧ ಮತ್ತು ಸ್ಕಂದ(ಖಂದಇ) ಎಂಬ ರೂಪಗಳ ಪ್ರಭಾವವಿದೆ.

ಇಂದಿನ ಕನ್ನಡದ ಆಡುಮಾತಿನಲ್ಲಿಯೂ ಅನೇಕ ಪ್ರಾಕೃತಮೂಲದ ಪದಗಳಿವೆ. ಅಜ್ಜ, ಅಯ್ಯ, ಕಷಾಯ, ನೇಹ, ಸಮಣ ಮುಂತಾದವು ಇದಕ್ಕೆ ನಿದರ್ಶನಗಳು. ಈ ಪದಗಳನ್ನು ಅವುಗಳ ಸಂಸ್ಕೃತ ಮೂಲದ ಜೊತೆಯಲ್ಲಿಯೇ ಬಳಸುತ್ತೇವೆ. ಕೆಲವು ಬಾರಿ, ಮೂಲ ಸಂಸ್ಕೃತಪದಗಳು ಕನ್ನಡದಲ್ಲಿ ಇರುವುದೇ ಇಲ್ಲ. ಬೇರೆ ಕೆಲವು ಸಂದರ್ಭಗಳಲ್ಲಿ ಸಂಸ್ಕೃತ ಹಾಗೂ ಪ್ರಾಕೃತ ಪದಗಳು ವಿಭಿನ್ನ ಅರ್ಥಗಳಲ್ಲಿ ಕನ್ನಡದಲ್ಲಿ ಬಳಕೆಯಾಗುತ್ತವೆ. ಉದಾಹರಣೆಗೆ ಉಪಾಧ್ಯಾಯ, ಓಜ ಮತ್ತು ವಾಜ ಎಂಬ ರೂಪಗಳನ್ನು ಗಮನಿಸಬಹುದು. ಈ ಸಂಗತಿಯನ್ನು ಭ.ಕೃಷ್ಣಮೂರ್ತಿಯವರು ಅನೇಕ ಉದಾಹರಣೆಗಳೊಂದಿಗೆ ಸ್ಪಷ್ಟಪಡಿಸುತ್ತಾರೆ. ದ್ರಾವಿಡ ಭಾಷೆಗಳಲ್ಲಿ ದಾಖಲೆಯಾಗಿರುವ ಎರವಲು ಪದಗಳೆಲ್ಲವೂ ಧ್ವನಿಸಾಮ್ಯದ ದೃಷ್ಟಿಯಲ್ಲಿ ಸಂಸ್ಕೃತಕ್ಕಿಂತ ಪಾಲಿ ಮತ್ತು ಪ್ರಾಕೃತಗಳಿಗೆ ನಿಕಟವಾಗಿವೆ. ಇವು ಕನ್ನಡಕ್ಕೆ ಬಂದಿದ್ದು, ಮಧ್ಯ ಇಂಡಿಕ್ ಭಾಷೆಯ ಆಡುಮಾತಿನ ರೂಪಗಳಾದ ಪಾಲಿ.ಪ್ರಾಕೃತಗಳಿಂದ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಎಂದರೆ, ಪ್ರಾಕೃತಭಾಷಿಕರ ಸಂಗಡವೇ ಜೀವಿಸುತ್ತಿದ್ದ ದ್ರಾವಿಡ ಹಿನ್ನೆಲೆಯವರು ಈ ಪದಗಳನ್ನು ತದ್ಭವೀಕರಣ ಮಾಡಿಕೊಂಡಿದ್ದರು. ಇಷ್ಟಾದ ಮೇಲೆ ಅವುಗಳನ್ನು ಇನ್ನುಳಿದ ದ್ರಾವಿಡ ಭಾಷಿಕ ಸಮುದಾಯಗಳಿಗೆ ತಲುಪಿಸುವುದು ಸುಲಭವಾಯಿತು. ((Dravidian Languages’, by Bhadriraju Krishnamurty, 2003, Camridge University Press.) ತತ್ಸಮಗಳು ದ್ರಾವಿಡಭಾಷೆಯೊಳಗೆ ಪ್ರವೇಶಿಸಿದ್ದು ಅನಂತರದ ಹಂತದಲ್ಲೆಂದೂ ಅದಕ್ಕೆ ಸುಶಿಕ್ಷಿತ ಸಮುದಾಯಗಳೇ ಕಾರಣವೆಂದೂ ಕೃಷ್ಣಮೂರ್ತಿಯವರು ಅಭಿಪ್ರಾಯ ಪಡುತ್ತಾರೆ. ಕೇವಲ ಆಡುಮಾತನ್ನು ಬಲ್ಲ ಸಮುದಾಯಗಳ ಆಯ್ಕೆಯು ಮೊದಲಿನಿಂದಲೂ ತದ್ಭವಗಳೇ ಎಂದು ಅವರು ಹೇಳುತ್ತಾರೆ.

ಯಾವುದೋ ಒಂದು ಕಾಲಖಂಡದಲ್ಲಿ ಕನ್ನಡದಲ್ಲಿ ಸಕ್ರಿಯವಾಗಿದ್ದ ಧ್ವನಿಯಮಗಳ ಮೂಲವು ಪ್ರಾಕೃತವೆಂದು ವಿದ್ವಾಂಸರು ತೋರಿಸಿಕೊಟ್ಟಿದ್ದಾರೆ:

  1. ಸಂಸ್ಕೃತದ ಋ ಎಂಬ ಸ್ವರವು, ಪ್ರಾಕೃತ ಮತ್ತು ಕನ್ನಡಗಳೆರಡರಲ್ಲಿಯೂ ರ್ ಕಾರವಾಗಿ ಬದಲಾವಣೆ ಹೊಂದುತ್ತದೆ. ಅನಂತರ ಅದಕ್ಕೆ ಅ, ಇ ಅಥವಾ ಉ ಎಂಬ ಸ್ವರಗಳು ಸೇರಿಕೊಳ್ಳುತ್ತವೆ.
  2. ಉದಾ: ಋಣ...................ರಿಣ, ಶೃತಿ.............ಶ್ರುತಿ

  3. ಪದದ ಮೊದಲಿನಲ್ಲಿ ಬರುವ ಮತ್ತು ಕೊನೆಯಲ್ಲಿ ಬರುವ ಅ ಕಾರವು ಅನುಕ್ರಮವಾಗಿ ಇ/ಎ ಅಥವಾ ಉ ಕಾರವಾಗಿ ಬದಲಾಗುತ್ತದೆ.

    ಉದಾ: ಅಂಗಾರ..............ಇಂಗಳ, ದಂಡ............ದಂಡು

  4. ಐ ಮತ್ತು ಔ ಗಳು ಎ ಮತ್ತು ಒ ಆಗಿ ಬದಲಾಗುತ್ತವೆ
  5. ಉದಾ: ವೈದ್ಯ........... ಬೆಜ್ಜ, ಕೌಂಗು............ಕೊಂಗು

  6. ವಿಜಾತಿಯ ಸಂಯುಕ್ತಾಕ್ಷರಗಳು ಸಜಾತೀಯ ಸಂಯುಕ್ತಾಕ್ಷರಗಳಾಗಿ ಬದಲಾಗುತ್ತವೆ.

    ಉದಾ: ಕಳ್ತೆ..........ಕತ್ತೆ, ಮೃತ್ಯು......ಮಿಳ್ತು.......ಮಿತ್ತು, ದೃಷ್ಟಿ......ದಿಟ್ಟಿ

ವಿಭಕ್ತಿ ಪ್ರತ್ಯಯಗಳ ನೆಲೆಯಲ್ಲಿಯೂ ಕನ್ನಡ ಮತ್ತು ಪ್ರಾಕೃತಗಳ ನಡುವೆ ಅನೇಕ ಸಾಮ್ಯಗಳಿವೆ.

ಈ ಎರಡು ಭಾಷಾಸಮುದಾಯಗಳ ನಡುವೆ ಬೆಳೆದುಬಂದಿರುವ ಐತಿಹಾಸಿಕ ಸಂಬಂಧಗಳ ಪರಿಶೀಲನೆಯು ಬಹಳ ಉಪಯುಕ್ತವಾಗುತ್ತದೆ.

 

ಮುಖಪುಟ / ಭಾಷೆ